ಮನೋವೈಕಲ್ಯ -
ಉನ್ಮಾದ ರೋಗ ವೈದ್ಯ ವಿಜ್ಞಾನದಲ್ಲಿ `ಉನ್ಮಾದ ಪದಕ್ಕೆ ಕೊಡುವ ಅರ್ಥಕ್ಕೂ ನ್ಯಾಯ ಶಾಸ್ತ್ರದಲ್ಲಿ ಕೊಡುವ ಅರ್ಥಕ್ಕೂ ಖಚಿತವಾದ ತಾರತಮ್ಯವಿದೆ. ನ್ಯಾಯಶಾಸ್ತ್ರದಲ್ಲಿ ಮನೋವೈಕಲ್ಯಕ್ಕೆ ಒಳಗಾದ ವ್ಯಕ್ತಿ ಯಾವ ಪೂರ್ವಾಗ್ರಹವಿಲ್ಲದೆ ಅಪರಾಧ ಮಾಡಿದರೆ ಅದು ಅಪರಾಧವೆಂದು ಗಣಿಸುವುದಿಲ್ಲ. ಯಾವುದಾದರೂ ತಪ್ಪು ಕೃತ್ಯ ಮತ್ತು ಕೆಟ್ಟ ಉದ್ದೇಶ ಇವೆರಡು ಕೂಡಿರಬೇಕು. ಮನೋವಿಕಲ ವ್ಯಕ್ತಿಯ ಕಾರ್ಯದಲ್ಲಿ ಇವೆರಡೂ ಕೂಡಿರುವುದಿಲ್ಲ. ಅವನಲ್ಲಿ ಕೆಟ್ಟ ಉದ್ದೇಶವಿರುವುದಿಲ್ಲ. ಮಾನಸಿಕ ಸ್ವಾಸ್ಥ್ಯವಿಲ್ಲದವರನ್ನು ನ್ಯಾಯಲಯಗಳು ತಿದ್ದಲಾರವು. ಅವನಿಗೆ ಶಿಕ್ಷೆ ವಿಧಿಸಿದರೆ ಅದು ಹಿಂಸೆಯಾಗುತ್ತದೆ, ಶಿಕ್ಷೆಯಾಗಲಾರದು. ಆದುದರಿಂದ ಕೆಲವು ದೇಶದ ನ್ಯಾಯಾಲಯಗಳು ಮನೋವೈಕಲ್ಯದಿಂದಾಗಿ ಉನ್ಮಾದ ಪೀಡಿತರಾದವರಿಗೆ ಶಿಕ್ಷೆ ವಿಧಿಸಲು ನಿರಾಕರಿಸಿವೆ. ಪುರಾತನಕಾಲದಿಂದಲೂ ಮಕ್ಕಳು ಮತ್ತು ಮನೋವಿಕಲರಿಗೆ ಮತ್ತು ಇತರರಿಗೆ ಕೊಡುವ ಶಿಕ್ಷೆಯಲ್ಲಿ ವ್ಯತ್ಯಾಸವಿತ್ತು. ಸರಿಯಾದವರು ತಪ್ಪು ಮಾಡಿದರೆ ಕ್ರೂರ ಶಿಕ್ಷೆಯನ್ನೂ ಬಾಲರು ಮತ್ತು ಉನ್ಮಾದ ಪೀಡಿತ ಮನೋವಿಕಲರು ತಪ್ಪು ಮಾಡಿದರೆ ಅವರಿಗೆ ಬಿಳಲಿನಿಂದ ಅಥವಾ ಬಿದಿರಿನ ಸೆಳೆಯಿಂದ ಹೊಡೆಯಬೇಕು ಅಥವಾ ಅವರನ್ನು ಕಟ್ಟಬೇಕು ಎಂದು ಮನುಸ್ಮøತಿಯಲ್ಲಿ ಹೇಳಿರುವುದನ್ನು ಉದಾಹರಿಸುತ್ತಾರೆ.
ಉನ್ಮಾದಿತ ಮನೋವಿಕಲರು ಮಾಡುವ ಅಪರಾಧಿಗಳಿಗೆ ಶಿಕ್ಷೆಯಿಲ್ಲವೆಂದಾದರೆ ಪ್ರತಿಯೊಬ್ಬ ಅಪರಾಧಿ ತಾನು ಉನ್ಮಾದಾವಸ್ಥೆಯಿಂದ ತಪ್ಪು ಮಾಡಿದೆನೆಂದು ವಾದಿಸಬಹುದು. ಆದುದರಿಂದ ಯಾವ ಸಂದರ್ಭದಲ್ಲಿ ಮನೋವೈಕಲ್ಯ ಹೊಂದಿದವನು ಉನ್ಮಾದ ಯುಕ್ತನೆನ್ನಬಹುದು ಅವನು ಯಾವ ಸಮಯದಲ್ಲಿ ಮತ್ತು ಯಾವ ಪರಿಸ್ಥಿತಿಯಲ್ಲಿ ಮಾಡಿದ ಕಾರ್ಯಶಿಕ್ಷಾರ್ಹವಲ್ಲ ಎಂಬ ವಿಚಾರವನ್ನು ನಿರ್ಧರಿಸಬೇಕಾಯಿತು.

ಬ್ರಿಟನ್ನಿನ ಪ್ರಧಾನ ಮಂತ್ರಿಯಾಗಿದ್ದ ಸರ್ ರಾಬರ್ಟ್ ಪೀಲ್ ಅವರ ಆಪ್ತ ಕಾರ್ಯದರ್ಶಿ ದ್ರಮ್ಮಂಡ್ ಅವರನ್ನು ಡೇನಿಯಲ್ ಮೆಕ್‍ನೋಕ್ಟನ್ ಎಂಬ ಮನೋವ್ಯಾಧಿ ಪೀಡಿತ ಉನ್ಮಾದಿತನಾಗಿ ಅವರೇ ಪ್ರಧಾನಮಂತ್ರಿ ಪೀಲರೆಂದು ತಿಳಿದು ಕೊಲೆ ಮಾಡಿದ್ದ. 1843 ರಲ್ಲಿ ನ್ಯಾಯಾಲಯದಲ್ಲಿ ಇದೊಂದು ಮಹತ್ತ್ವದ ಘಟನೆಯಾಗಿ ಆತ ಉನ್ಮಾದಾವಸ್ಥೆಯಲ್ಲಿ ಕೊಲೆಮಾಡಿದನೆಂದೂ ಆದ್ದರಿಂದ ಅವನು ಶಿಕ್ಷಾರ್ಹನಲ್ಲವೆಂದೂ ನ್ಯಾಯಾಲಯ ತೀರ್ಪು ನೀಡಿತು. ಮೇಲ್ಮನೆಯಲ್ಲಿ ಇದರ ಚರ್ಚೆಯಾಗಿ 15 ಮಂದಿ ನ್ಯಾಯಾಧೀಶರ ಮಂಡಳಿಯನ್ನು ಕೇಳಿದಾಗ ಆ 15 ಮಂದಿ ನ್ಯಾಯಾಧೀಶರು ನೀಡಿದ ತೀರ್ಪು ಮೆಕ್‍ನೋಕ್ಟನ್ ನಿಯಮವೆನಿಸಿದವು. ಆ ನಿಯಮದ ಪ್ರಕಾರವೇ ಉನ್ಮಾದಿತರನ್ನು ಯಾವ ಸಂದರ್ಭದಲ್ಲಿ ಶಿಕ್ಷಿಸಬಹುದು ಅಥವಾ ಶಿಕ್ಷಾರ್ಹವಲ್ಲವೆಂದು ಹೇಳಬಹುದು ಎಂಬುದನ್ನು ನಿರ್ಧರಿಸಲಾಗುವುದು. 15 ಮಂದಿ ನ್ಯಾಯಾಧೀಶರು ಕೊಟ್ಟ ತೀರ್ಮಾನಗಳ ಸಾರಾಂಶ ಹೀಗಿದೆ:

1. ಪ್ರತಿಯೊಬ್ಬನೂ ಬುದ್ಧಿ ಸ್ವಾಸ್ಥ್ಯುಉಳ್ಳವನು. ಅವನು ತಾನು ಮಾಡಿದ ಅಪರಾಧಗಳಿಗೆ ಹೊಣೆಗಾರ.

2. ಉನ್ಮಾದದಿಂದ ಅಪರಾಧವನ್ನು ಮಾಡಿದುದೆಂದು ಮನೋವಿಕಲಕ್ಕೊಳಗಾದ ವ್ಯಕ್ತಿ ಹೇಳಬೇಕಾದಲ್ಲಿ ಅವನು ಅಪರಾಧವನ್ನು ಮಾಡುತ್ತಿದ್ದಾಗ ಅವನಿಗೆ ತನ್ನ ಕಾರ್ಯದ ಸ್ವಭಾವ ಅದರ ಒಳ್ಳೆಯದು ಕೆಟ್ಟದು ತಿಳಿಯಲು ಅಸಾಧ್ಯವಾಗಿರಬೇಕು. ಅವನಿಗೆ ಆ ಸಮಯದಲ್ಲಿ ವಿವೇಚನೆ ಕಳೆದುಹೋಗಿ ತಾನು ಕಾನೂನು ಬಾಹಿರ ಸದಾಚಾರ ವಿರೋಧ ಕೆಲಸವನ್ನು ಮಾಡುತ್ತಿದ್ದೇನೆಂಬುದು ತಿಳಿದಿರಬಾರದು.

3. ಅಪರಾಧಿಗೆ ತಾನು ಮಾಡಿದ ಕೆಲಸ ಮಾಡಬಾರದ ಕೆಲಸವೆಂದು ತಿಳಿದಿದ್ದು ಕಾನೂನಿಗೆ ವಿರೋಧವಾಗಿದ್ದರೆ ಅವನು ಶಿಕ್ಷಾರ್ಹನೆಂದು ಪರಿಗಣಿಸಬೇಕು.

4. ಮನೋವಿಕಲ ವ್ಯಕ್ತಿ ಉನ್ಮಾದದಿಂದ ಉಂಟಾದ ಭ್ರಾಂತಿಯಿಂದ ನಿಜ ಪರಿಸ್ಥಿತಿಯನ್ನೇ ವಿಕಲ್ಪವಾಗಿ ಕಲ್ಪಿಸಿಕೊಂಡು ಅದರ ಪ್ರಭಾವದಿಂದ ತಾನು ಮಾಡುತ್ತಿರುವ ಕಾರ್ಯದ ನಿಜ ಸ್ವರೂಪ ಅರಿಯದೆ ಕಾನೂನು ಬಾಹಿರ ಕೆಲಸ ಮಾಡಿದ ಪಕ್ಷದಲ್ಲಿ ಆ ರೋಗಿ ಕಲ್ಪಿಸಿಕೊಂಡ ಪರಿಸ್ಥಿಯ ಸನ್ನಿವೇಶವನ್ನೇ ನಿಜ ಸನ್ನಿವೇಶವೆಂದು ನ್ಯಾಯಸ್ಥಾನ ಅದಕ್ಕೆ ತಕ್ಕ ಶಿಕ್ಷೆ ಅವನಿಗೆ ವಿಧಿಸಬೇಕು.
ಭಾರತ ಮೆಕ್‍ನೋಕ್ಟನ್ ವಿಧಿಯ ಮೂಲತತ್ತ್ವಗಳ ಮೇಲೆ ಕಾನೂನು ರಚಿಸಿ ಕೊಂಡಿದೆ. ಭಾರತ ದಂಡ ಸಂಹಿತೆಯಲ್ಲಿ ಪ್ರತಿಯೊಂದು ಅಪರಾಧಗಳ ಸ್ಥಿರೀಕರಣಕ್ಕೆ ಬೇಕಾದ ಉದ್ದೇಶಗಳನ್ನು ವಿಶದೀಕರಿಸಿರುವುದರಿಂದ ಫಿರ್ಯಾದುಗಾರ ಸ್ಥಿರೀಕರಣಕ್ಕೆ ಬೇಕಾದ ಮೂಲಕಾರಣಗಳನ್ನು ಸಿದ್ಧಪಡಿಸಿ ತೋರಿಸಬೇಕು.

ಭಾರತ ದಂಡಸಂಹಿತೆಯ ನಾಲ್ಕನೆಯ ಅಧ್ಯಾಯ ಯಾವ ಸಂದರ್ಭಗಳಲ್ಲಿ ಅಪರಾಧ ಕಾನೂನಿನ ದೃಷ್ಟಿಯಿಂದ ಅಪರಾಧವಾಗಲಾರದು ಎಂಬ ವಿಚಾರವನ್ನು ವಿವಿಧ ವಿಧಿಗಳ ಮೂಲಕ ಸೃಷ್ಟೀಕರಿಸುತ್ತದೆ. ಈ ಅಧ್ಯಾಯದ 84ನೆಯ ವಿಧಿಯಲ್ಲಿ ಉನ್ಮಾದ ಪೀಡಿತರ ವಿಚಾರ ಈ ರೀತಿ ಹೇಳಿದೆ. ಕೃತ್ಯವನ್ನು ಮಾಡುತ್ತಿದ್ದ ಸಮಯದಲ್ಲಿ ವ್ಯಕ್ತಿ ಮನೋವೈಕಲ್ಯದಿಂದ ಆ ಕಾರ್ಯ ಕಾನೂನಿಗೆ ವಿರೋಧವಾದದ್ದು ಎಂದು ತಿಳಿಯಲು ಅಸಮರ್ಥನಾಗಿದ್ದರೆ, ಅವನು ಮಾಡಿದುದು ಅಪರಾಧವೆಂದು ಪರಿಗಣಿಸಲಾಗದು. 84ನೆಯ ವಿಧಿಯಂತೆ ಅಪರಾಧಿ ಕಾರ್ಯವನ್ನು ಮಾಡುವ ಸಮಯದಲ್ಲಿ ಮನಸ್ಸಿನ ಅಸ್ವಾಸ್ಥ್ಯದಿಂದ ಕೂಡಿರಬೇಕೆಂಬುದು ವಿಶದವಾಗುತ್ತದೆ. ಕಾರ್ಯವನ್ನು ಮಾಡುವ ಮೊದಲೆ ಅಪರಾಧಿ ಮನೋವೈಕಲ್ಯದಿಂದ ಚಿತ್ತ ವಿಕಾರಕ್ಕೊಳಗಾಗಿದ್ದ ಅಥವಾ ಕಾರ್ಯವನ್ನು ಮಾಡಿದ ಬಳಿಕ ಅವನ ಬುದ್ಧಿ ವಿಕಲತೆಯಾಯಿತೆಂದು ಕಂಡು ಬಂದಾಗ ಅಪರಾಧಿಗೆ 84ನೆಯ ವಿಧಿಯಂತೆ ಅಪವಾದವಾಗಲು ಸಾಧ್ಯವಿಲ್ಲ. ಅಪರಾಧಿ ಅಪರಾಧ ಮಾಡುವ ಮುನ್ನ ಹೇಗಿದ್ದ ಮತ್ತೆ ಯಾವ ರೀತಿ ನಡೆದುಕೊಳ್ಳುತ್ತಿದ್ದ ಎಂಬ ವಿಚಾರಗಳು ಅಪರಾಧ ಮಾಡುವ ವೇಳೆಯಲ್ಲಿ ಅವನ ಮಾನಸಿಕ ಪರಿಸ್ಥಿತಿಯನ್ನು ನಿರ್ಧರಿಸಲು ಮಾತ್ರ ಪ್ರಸಂಗೋಚಿತವಾಗುತ್ತದೆ. 84ನೆಯ ವಿಧಿಯಲ್ಲಿಯ ವಿಚಾರದಲ್ಲಿ ನ್ಯಾಯಾಲಯ ನಿರ್ಧರಿಸಬೇಕಾದುದು ಅಪರಾಧ ಮಾಡಿದ ಸಮಯದಲ್ಲಿ ಅಪರಾಧಿಯ ಮಾನಸಿಕ ಪರಿಸ್ಥಿತಿ ಹೇಗಿತ್ತೆಂಬ ವಿಚಾರವನ್ನು ಮಾತ್ರ. ಈ ವಿಧಿಯ ಪ್ರಯೋಜನವನ್ನು ಪಡೆಯಬೇಕಾದಲ್ಲಿ ಅಪರಾಧಿ ಮೊದಲು ತನಗೆ ಮನೋವೈಕಲ್ಯದಿಂದಾದ ಅಸ್ವಸ್ಥ್ಯದಿಂದ ಕಾರ್ಯದ ಸ್ವಭಾವ ಅಥವಾ ತಾನು ಮಾಡಿದ ಕಾರ್ಯ ತಪ್ಪು ಅಥವಾ ಕಾನೂನಿಗೆ ವಿರೋಧವಾದುದು ಎಂಬ ವಿಚಾರ ತಿಳಿಯದಿರುವುದನ್ನು ಸಾಬೀತುಪಡಿಸಬೇಕು. ಆಮೇಲೆ ಬುದ್ದಿಯ ಅಸ್ವಾಸ್ಥ್ಯ ಅಪರಾಧ ಮಾಡಿದ ಸಮಯದಲ್ಲಿ ಇತ್ತೆಂದು ಸಿದ್ಧಪಡಿಸಬೇಕು. ಈ ಎರಡು ಪ್ರಮುಖ ವಿಷಯಗಳನ್ನು ಸಿದ್ಧಪಡಿಸದಿದ್ದರೆ ಅಪರಾಧಿಗೆ 84ನೆಯ ವಿಧಿಯಲ್ಲಿ ಹೇಳಿದ ವಿನಾಯಿತಿ ದೊರಕದು.

ಭಾರತ ದಂಡಸಂಹಿತೆಯಲ್ಲಿ ಮಾನಸಿಕ ಅಸ್ವಾಸ್ಥ್ಯ ಅಥವಾ ಬುದ್ಧಿಯ ಅಸ್ವಾಸ್ಥ್ಯದ ಎಲ್ಲ ಅರ್ಥಗಳನ್ನು ನಿರ್ಣಯಿಸಿ ವಿವರಿಸಿಲ್ಲ. ನ್ಯಾಯಲಯಗಳು ಈ ಶಬ್ಧಕ್ಕೆ `ಉನ್ಮಾದ ಎಂಬ ಅರ್ಥವನ್ನು ಕಲ್ಪಿಸಿವೆ. ತಪ್ಪು ಸರಿ ಎಂಬುದರ ತಾರತಮ್ಯ ತಿಳಿದುಕೊಳ್ಳಲು ಅಸಾಧ್ಯವಾದಂಥ ಮಾನಸಿಕ ಅಸ್ವಾಸ್ಥ್ಯವನ್ನು ಮಾತ್ರ ನ್ಯಾಯಲಯಗಳು ಗಮನಕ್ಕೆ ತೆಗೆದುಕೊಂಡಿರುವುವು.

ನಿಜಪರಿಸ್ಥಿತಿಯನ್ನು ತಿಳಿದುಕೊಳ್ಳುವ ಅಸಮರ್ಥತೆ ತಾತ್ಕಾಲಿಕವಾಗಿ ಅಥವಾ ಸ್ವಾಭಾವಿಕವಾಗಿ ಅಥವಾ ಹಠಾತ್ತಾಗಿ ಸಂಭವಿಸಿದ್ದಾಗಲಿ ಅದು ಮನೋವೈಕಲ್ಯದ ಕಾರಣವಾಗಿಯೇ ಇರಲಿ ಹುಟ್ಟಿನಿಂದಲೇ ಇರಲಿ ಅವೆಲ್ಲ ಇದರಲ್ಲಿ ಸೇರಿ ಹೋಗುತ್ತವೆ. ಅರಿವು ಅಥವಾ ಜ್ಞಾನದ ಶಕ್ತಿಯನ್ನು ಕುಂದಿಸುವ ಮನಸ್ಸಿನ ಅಸ್ವಾಸ್ಥ್ಯ ಮಾತ್ರ ಅಪರಾಧಿಗೆ ವಿನಾಯಿತಿ ದೊರಕಿಸುತ್ತದೆ. ಮನಸ್ಸಿನ ಅಸ್ವಾಸ್ಥ್ಯ ಮಾತ್ರ ಅಪರಾಧಿಗೆ ವಿನಾಯಿತಿ ದೊರಕಿಸುತ್ತದೆ. ಮನಸ್ಸಿನ ಅಸ್ವಾಸ್ಥ್ಯ ಎಷ್ಟರಮಟ್ಟಿಗೆ ಇರಬೇಕೆಂದರೆ ಅಪರಾಧಿಗೆ ತಾನು ಮಾಡುವ ಕೆಲಸ ತಪ್ಪು ಅಥವಾ ಕಾನೂನಿಗೆ ವಿರೋಧ ಎಂಬುದರ ಅರಿವಿರಬಾರದು.

84ನೆಯ ವಿಧಿಯಲ್ಲಿ ತಿಳಿದುಕೊಳ್ಳುವ ಅಸಮರ್ಥತೆ ಎಂಬ ಪದ ಪ್ರಯೋಗ ಮಹತ್ತ್ವದ್ದಾಗಿದೆ. ಇಲ್ಲಿ ಒಂದು. ಒಂದು ವಿಚಾರವನ್ನು ತಿಳಿಯುವ ಅಸಮರ್ಥತೆಗೂ ಒಬ್ಬ ತಿಳಿಯದ ವಿಚಾರಕ್ಕೂ ತುಂಬ ವ್ಯತ್ಯಾಸವಿದೆ. ಅಸಮರ್ಥತೆ ಸ್ವಾಭಾವಿಕವಿರಬಹುದು. ತಪ್ಪು ತಿಳಿವಳಿಕೆ ದುಷ್ಟ ಸ್ವಭಾವದಿಂದ ಜನ್ಮವಾಗಬಹುದು. ಕಾನೂನು ರಕ್ಷಿಸುವುದು ಸ್ವಾಭಾವಿಕ ಅಶಕ್ತತೆಯನ್ನು ಒಬ್ಬನಿಗೆ ತಾನು ಉಪಯೋಗಿಸುವ ಹೊರಗಿನ ಸಾಧನಗಳ ಗುಣಾವಗುಣ, ಅವುಗಳ ಕಾರ್ಯ ತಿಳಿವಳಿಕೆ ಇಲ್ಲದಿದ್ದಾಗ ಅವನಿಗೆ ತಾನು ಮಾಡುತ್ತಿರುವ ಕೆಲಸದ ಸ್ವಭಾವದ ಅರಿವು ಇಲ್ಲವೆನ್ನಬೇಕು ಎಂಬ ಮಾತು ಇದೆ. ಈ ವಿನಾಯಿತಿ ಸಾಮಾನ್ಯವಾಗಿ ಮೂಢ ಅಥವಾ ವಿವೇಕವನ್ನು ಸಂಪೂರ್ಣ ಕಳೆದುಕೊಂಡ ಪ್ರಾಣಿಗೂ ಮನುಷ್ಯನಿಗೂ ಭೇದವಿಲ್ಲದಂತಿರುವ ಮನೋರೋಗಿಗಳಿಗೆ ಮಾತ್ರ ಅನ್ವಯವಾದೀತು. 
ಭಾರತ ದಂಡ ಸಂಹಿತೆಯ ಪ್ರಕಾರ ಮನೋವೈಕಲ್ಯಪೀಡಿತನ ಉನ್ಮಾದಾವಸ್ಥೆ ತಿಳಿಯಲು ಎರಡು ಪರೀಕ್ಷೆಗಳು ಇವೆ. ಒಂದು ತಾನು ಮಾಡುವ ಕೆಲಸದ ಸ್ವಭಾವ ತಿಳಿಯದಷ್ಟು ಅಪರಾಧಿಯ ಉನ್ಮಾದ ತಲುಪಿರಬೇಕು ಎರಡು ಅಂಥ ಉನ್ಮಾದ ಅಪರಾಧಿಯನ್ನು ತಾನು ಮಾಡುತ್ತಿರುವುದು ತಪ್ಪು ಎಂಬ ತಿಳಿವಳಿಕೆಯಿಂದ ಬಾಹಿರ ಪಡಿಸಿರಬೇಕು. ಆದರೆ ಇವೆರಡೂ ಒಟ್ಟಿಗೆ ಸೇರಿರಬೇಕೆಂದಿಲ್ಲ. ಉನ್ಮಾದವನ್ನು ಸಿದ್ಧಪಡಿಸುವ ಭಾರ ಆಪಾದಿತನದು. ಭಾರತದ ಪುರಾವೆ ಕಾಯಿದೆಯ 105 ನೆಯ ವಿಧಿಯ ಪ್ರಕಾರ ಅಪವಾದಗಳು ಅನ್ವಯವಾಗುವುದನ್ನು ಸಾಬೀತು ಪಡಿಸುವುದು ಅಪರಾಧಿಯ ಹೊಣೆ.

ಮನೋವೈಕಲ್ಯದಿಂದ ಉನ್ಮಾದಿತರಾದವರಿಂದ ಸಮಾಜಕ್ಕೆ ಯುಕ್ತ ರಕ್ಷಣೆ ನೀಡಲು 471ನೆಯ ಭಾರತ ಅಪರಾಧ ದಂಡ ಪ್ರಕ್ರಿಯಾ ಸಂಹಿತೆಯ ಪ್ರಕಾರ ಅಪರಾಧ ಸ್ಥಿರಪಟ್ಟರೆ ನ್ಯಾಯಾಲಂiÀi ಅವನನ್ನು ಯುಕ್ತಕಂಡ ಸ್ಥಳ ಮತ್ತು ಕ್ರಮದಲ್ಲಿ ಬಂದೋಬಸ್ತಿನಲ್ಲಿ ಇಡಲು ಅಪ್ಪಣೆ ಮಾಡಿ ಅದನ್ನು ರಾಜ್ಯ ಸರ್ಕಾರಕ್ಕೆ ತಿಳಿಸುತ್ತದೆ. ಬಂದೀಖಾನೆಯ ಅಧಿಕಾರಿಗಳು ಅಥವಾ ಮನೋರೋಗ ಆಸ್ಪತ್ರೆಯ ಸಂದರ್ಶಕರು ಅಪರಾಧಿ ತನಗಾಗಲಿ ಇನ್ನೊಬ್ಬರಿಗಾಗಲಿ ತೊಂದರೆ ತರುವ ಸಂಭವವಿಲ್ಲವೆಂದು ದೃಢಿಕರಿಸಿದರೆ ರಾಜ್ಯ ಸರ್ಕಾರ ಅವನನ್ನು ಬಿಡಬಹುದು. 475 ನೆಯ ವಿಧಿಯ ಪ್ರಕಾರ ಅಪರಾಧಿಯ ಸಂಬಂಧಿಕ ಅಥವಾ ಮಿತ್ರ ಅಪರಾಧಿ ತಪ್ಪು ಮಾಡದಂತೆ ನೋಡಿಕೊಳ್ಳುವ ಹೊಣೆ ಹೊತ್ತು ರಾಜ್ಯಸರ್ಕಾರ ಅಪರಾಧಿಯನ್ನು ಹಾಜರು ಪಡಿಸಬೇಕೆಂದು ಕೇಳಿದ ಸಮಯದಲ್ಲಿ ಹಾಜರು ಪಡಿಸಲು ಒಪ್ಪಿದರೆ ಅವರ ವಶಕ್ಕೆ ಮನೋರೋಗಿಯನ್ನು ವಹಿಸಿಕೊಡಲು ಸರ್ಕಾರ ಆಜ್ಞೆ ಮಾಡಬಹುದು.

ಮೇಲೆ ಹೇಳಿದ ಮೆಕ್‍ನೋಕ್ಟನ್ ಕಾಯಿದೆ ಬಹಳ ಸಂಕುಚಿತ ಭಾವನೆಯದೆಂದು ನ್ಯಾಯವಾದಿಗಳು ಆರೋಪಿಸಿರುವರು. ಆಧುನಿಕ ವೈದ್ಯಕೀಯ ಅಭಿಪ್ರಾಯಗಳನ್ನು ಹೊಂದಿಲ್ಲವೆಂದೂ ಕೆಲವರ ಅಭಿಮತ. ಆ ಕಾಯಿದೆ ರೂಪಿಸಿದಾಗ ಮನಸ್ಸನ್ನು ವಿವಿಧ ಭಾಗಗಳನ್ನಾಗಿ ವಿಭಾಗಿಸಬಹುದೆಂದೂ ಅವುಗಳಲ್ಲಿ ಕೆಲವು ರೋಗಾವಿಷ್ಟವಾಗಿರಬಹುದು. ಕೆಲವು ಸರಿಯಾಗಿರಬಹುದು ಎಂಬ ಅಭಿಪ್ರಾಯ ವೈದ್ಯವಿಜ್ಞಾನ ಮತ್ತು ನ್ಯಾಯಶಾಸ್ತ್ರ ಬಲ್ಲವರಲ್ಲಿತ್ತು. ಈಗ ಆಧುನಿಕ ಮನಶಾಸ್ತ್ರಜ್ಞರು, ವೈದ್ಯರು ಮನಸ್ಸನ್ನು ವಿವಿಧ ಭಾಗಗಳಾಗಿ ವಿಭಾಗಿಸಲು ನಿರಾಕರಿಸುತ್ತಾರೆ. ಮನೋಸ್ಥಿರತೆಯನ್ನು ಕಳೆದುಕೊಂಡ ಮನುಷ್ಯನ ಉನ್ಮಾದಾವಸ್ಥೆ ಸಂಪೂರ್ಣ ಮಾನಸಿಕ ಪರಿಸ್ಥಿತಿಯನ್ನು ಹದಗೆಡಿಸುತ್ತದೆ ಎಂಬುದು ಈಗಿನ ಅಭಿಪ್ರಾಯ. (ನೋಡಿ- ಉನ್ಮಾದ-ರೋಗ) 		
(ಕೆ.ಜಿ.ಬಿ.)

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ